ಬೆಂಗಳೂರು: ನಗರದ ನೆಲಗದರನಹಳ್ಳಿಯಲ್ಲಿ ಮುಂಜಾನೆ ಒಂಟಿಯಾಗಿ ಮನೆಗೆ ತೆರಳುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿ ಚಿನ್ನದ ಸರ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ಹಾಲಿನ ವ್ಯಾಪಾರ ಮುಗಿಸಿ ಬೆಳಗ್ಗೆ ಸುಮಾರು 5.15ಕ್ಕೆ ಮನೆಗೆ ಮರಳುತ್ತಿದ್ದ ವಿಜಯಮ್ಮ ಅವರನ್ನು ಬೈಕ್ನಲ್ಲಿ ಬಂದ ಇಬ್ಬರು ಆರೋಪಿಗಳು ಹಿಂಬಾಲಿಸಿದ್ದಾರೆ. ಬಳಿಕ ಒಬ್ಬ ಆರೋಪಿ ಮಹಿಳೆಯನ್ನು ಹಿಡಿದುಕೊಂಡು, ಮತ್ತೊಬ್ಬ ಬೈಕ್ನಿಂದ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾನೆ.
ಮಹಿಳೆ ಜೋರಾಗಿ ಕೂಗಿಕೊಂಡಾಗ ಸಮೀಪದಲ್ಲಿದ್ದ ಬೀದಿ ನಾಯಿಯೊಂದು ಆರೋಪಿಗಳತ್ತ ಧಾವಿಸಿದೆ. ಈ ವೇಳೆ ದುಷ್ಕರ್ಮಿಗಳು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಆರೋಪಿಗಳು ಬೈಕ್ನ ನಂಬರ್ ಪ್ಲೇಟ್ ತೆಗೆದು ಕೃತ್ಯ ಎಸಗಿರುವುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
