ದೆಹಲಿ: ಭಾರತದ ಸಹನೆ ಮತ್ತು ಉದಾರತೆಯನ್ನು ದೌರ್ಬಲ್ಯವೆಂದು ಯಾರೂ ತಪ್ಪಾಗಿ ಅರ್ಥೈಸಬಾರದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
‘Declassified: Operation Sindoor’ ಸಾಕ್ಷ್ಯಚಿತ್ರ ಸರಣಿಯಲ್ಲಿ ಮಾತನಾಡಿರುವ ದೋವಲ್, 88 ಗಂಟೆಗಳ ಆಪರೇಷನ್ ಸಿಂಧೂರ್ನ ಪ್ರಮುಖ ಗುರಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಉಗ್ರ ಶಿಬಿರಗಳನ್ನು ನಾಶಪಡಿಸುವುದಾಗಿತ್ತು ಎಂದು ತಿಳಿಸಿದ್ದಾರೆ.
“ಭಾರತ ಅಪಾಯಗಳನ್ನು ಎದುರಿಸಲು ಸಿದ್ಧವಿದೆ. ಪರಿಣಾಮಗಳೇನೇ ಇರಲಿ, ಅಗತ್ಯವಿದ್ದರೆ ಕಠಿಣವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯ ಭಾರತಕ್ಕಿದೆ” ಎಂದು ದೋವಲ್ ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿಕ ಮೇ 7ರಂದು ಆಪರೇಷನ್ ಸಿಂಧೂರ್ ಆರಂಭವಾಗಿದ್ದು, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಹಲವು ಉಗ್ರ ಮೂಲಸೌಕರ್ಯಗಳ ಮೇಲೆ ನಿಖರ ದಾಳಿ ನಡೆಸಲಾಗಿತ್ತು.
ಆಪರೇಷನ್ ಸಿಂಧೂರ್ಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಕಾರ್ಯಾಚರಣೆಯ ಕುರಿತು ಭಾರತದ ಸೇನಾ ಹಾಗೂ ರಾಷ್ಟ್ರೀಯ ಭದ್ರತಾ ನಾಯಕರ ನೇರ ಅನುಭವಗಳನ್ನು ಒಳಗೊಂಡ ಎರಡು ಭಾಗಗಳ ಸಾಕ್ಷ್ಯಚಿತ್ರ ‘Declassified: Operation Sindoor’ ಶನಿವಾರ ಡಿಸ್ಕವರಿ ಹಾಗೂ discovery+ನಲ್ಲಿ ಪ್ರಸಾರವಾಗಲಿದೆ.
