ಇವನಮ್ಮವಮಸೂದೆ– ಇದು ಚಾರಿತ್ರಿಕ ಹೆಜ್ಜೆ -ನಟರಾಜ್ ಹುಳಿಯಾರ್ 

ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ ಒದಗಿಸುವ ‘ಇವ ನಮ್ಮವ’ ಮಸೂದೆ, ‘ಕನ್ನಡ ವಿವೇಕ’ ಪರಂಪರೆಯ ಭಾಗವಾದ ಬಹುತ್ವವನ್ನು ದೇಶಕ್ಕೆ ಮತ್ತೊಮ್ಮೆ ಪರಿಚಯಿಸುತ್ತಿದೆ. ಇದು ಕಾಯ್ದೆಯಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ, ಸಮಾಜದಲ್ಲಿ ಮಡುಗಟ್ಟಿದ ಜಾತಿವ್ಯಸನದ ರಾಡಿಯನ್ನು ಕೊಂಚವಾದರೂ ತಿಳಿಯಾಗಿಸಬಲ್ಲದು.

 

***

 

ಇವ ನಮ್ಮವ ಮಸೂದೆ– ಇದು ಚಾರಿತ್ರಿಕ ಹೆಜ್ಜೆ

 

-ನಟರಾಜ್ ಹುಳಿಯಾರ್

 

ಮಾರ್ಚ್ 23, 2026. ಬಸವಣ್ಣನವರ ‘ಇವ ನಮ್ಮವ’ ಎಂಬ ಸರ್ವಸ್ವೀಕಾರದ ರೂಪಕ ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕಾರವಾದ ದಿನ. ಅದು ಅಂತರ್ಜಾತೀಯ ವಿವಾಹವು ಜಾತಿನಿರ್ಮೂಲನದ ಪ್ರಬಲ ಸಾಧನ ಎಂದು ಪ್ರತಿಪಾದಿಸಿದ್ದ ರಾಮಮನೋಹರ ಲೋಹಿಯಾರ ಜನ್ಮದಿನ ಕೂಡ. ಅಂಬೇಡ್ಕರ್ ಕೂಡ ಇದೇ ಮಾರ್ಗವನ್ನು ಸೂಚಿಸಿದ್ದರು. ವಚನಯುಗದ ಆದರ್ಶ ನುಡಿಯನ್ನೇ ಮಸೂದೆಯ ಹೆಸರನ್ನಾಗಿಸುವ ಮೂಲಕ ಕಾನೂನು–ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಜಾಣ, ತಾತ್ತ್ವಿಕ ಹೆಜ್ಜೆಯನ್ನಿಟ್ಟಿದ್ದರು!

 

‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿರುವ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ–2026’ ಒಳಗೊಂಡ ಕಾಳಜಿಗಳು ಪಕ್ಷಾತೀತವಾಗಿ ಎಲ್ಲರಿಗೂ ಒಪ್ಪಿಗೆಯಾಗುವಂತಿದ್ದವು. ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ನೋಡುವುದಕ್ಕೂ ಸಾಧ್ಯವಿಲ್ಲದ ಘನಘೋರ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿರುವುದನ್ನು ನೋಡಿದ್ದೇವೆ, ಅಮಾನುಷ ಕೊಲೆಗಳಾಗುತ್ತಿವೆ. ಬೆಳಗ್ಗೆ ಎದ್ದು ಪತ್ರಿಕೆಯಲ್ಲಿ ಕರುಳು ಹಿಂಡುವಂಥ ಘಟನೆಗಳನ್ನು ನೋಡುತ್ತಿದ್ದೇವೆ’ ಎನ್ನುತ್ತಾ ಮಸೂದೆಯನ್ನು ಒಪ್ಪಿದ್ದರು. ಮಸೂದೆಯಲ್ಲಿದ್ದ ಒಂದೆರಡು ಪದಗಳ ಬಗ್ಗೆ ಎಸ್‌. ಸುರೇಶ್‌ಕುಮಾರ್ ಸೂಚಿಸಿದ ತಿದ್ದುಪಡಿಯನ್ನು ಸಚಿವರು ಒಪ್ಪಿಕೊಂಡರು. ಪಾಟೀಲರ ಜೊತೆಗೆ, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಎಚ್.ಸಿ. ಮಹಾದೇವಪ್ಪ ಹಾಗೂ ಕಾಳಜಿಯುಳ್ಳ ಅಧಿಕಾರಿಗಳು ಮಸೂದೆಯ ಹಿಂದೆ ಕೆಲಸ ಮಾಡಿದ್ದರು. ವಿಧಾನಸಭೆಯ ಒಳಹೊರಗೆ ‘ಇವ ನಮ್ಮವ’ ವಚನವನ್ನು ಸದಾ ಉಲ್ಲೇಖಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪೂರ್ಣ ಬೆಂಬಲ ಈ ಮಸೂದೆಗಿತ್ತು.

 

ದಲಿತ ಯುವಕನನ್ನು ವರಿಸಿದ್ದ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಮಾನ್ಯಾ ಪಾಟೀಲ ಎನ್ನುವ ಏಳು ತಿಂಗಳ ಗರ್ಭಿಣಿ ವೈದ್ಯಕೀಯ ಸೌಲಭ್ಯಕ್ಕಾಗಿ ಆಸ್ಪತ್ರೆಯಲ್ಲಿ ‘ತಾಯಿ ಕಾರ್ಡ್’ ಮಾಡಿಸಲು ಊರಿಗೆ ಬಂದಾಗ ಆಕೆಯ ಭೀಕರ ಹತ್ಯೆಯಾಯಿತು. ಆಗ ಜಾತ್ಯತೀತ ತಂಡಗಳು, ದಲಿತ ಸಂಘಟನೆಗಳು ವಿಶೇಷ ಕಾಯ್ದೆಗಾಗಿ ಸರ್ಕಾರವನ್ನು ಒತ್ತಾಯಿಸಿದ್ದವು. ಕರ್ನಾಟಕದ ಕಾಳಜಿವಂತರು ಹಾಗೂ ಸರ್ಕಾರದ ಜಾಗೃತಪ್ರಜ್ಞೆಯ ಫಲವಾಗಿ, ಭಾರತದಲ್ಲೇ ಮೊಟ್ಟಮೊದಲಿಗೆ ಅತ್ಯಂತ ದೂರಗಾಮಿ ಪರಿಣಾಮ ಬೀರಬಲ್ಲ ಮಹತ್ತರ ಮಸೂದೆ ಕರ್ನಾಟಕ ವಿಧಾನಸಭೆಯಲ್ಲಿ ಧ್ವನಿಮತದಿಂದ ಪಾಸಾಯಿತು. ಇದು ಕರ್ನಾಟಕದ ಚಾರಿತ್ರಿಕ ಹೆಮ್ಮೆಯ ಗಳಿಗೆ.

 

ತಂತಮ್ಮ ಜಾತಿ, ಧರ್ಮಗಳ ಅಹಂಕಾರ, ಠೇಂಕಾರದಿಂದ ಅಂತರ್ಜಾತೀಯ–ಅಂತರ್ಧರ್ಮೀಯ ವಿವಾಹಿತರನ್ನು ಹಿಂಸಿಸುವ ಮರ್ಯಾದೆ ಹೆಸರಿನ ಹತ್ಯೆಯ ಕ್ರೌರ್ಯವನ್ನು ‘ಮರ್ಯಾದೆಗೇಡಿ ಹತ್ಯೆ’, ‘ಮಾನಗೇಡಿ ಕೊಲೆ’ ಎಂದು ಧಿಕ್ಕರಿಸಿ ನಾಡಿನ ಪ್ರಗತಿಪರ ವಲಯ ಪ್ರತಿಭಟಿಸುತ್ತಲೇ ಬಂದಿದೆ. ಜಾತಿವಾದಿ, ಕೋಮುವಾದಿ ಚೀರಾಟಗಳ ಕಾರಣದಿಂದ ಹುಸಿ ಮರ್ಯಾದೆಯ ಭಾಷೆಯ ಅಬ್ಬರ ಅತಿಯಾಗಿರುವುದರಿಂದ ಕೂಡ ಇಂಥ ಹತ್ಯೆಗಳು ಹೆಚ್ಚಿವೆ. ಅಂತರ್ಜಾತೀಯ ಜೋಡಿಗಳ ಹತ್ಯೆ, ಕಿರುಕುಳಗಳ ಕೇಡಿಗತನಕ್ಕೆ ಕಾನೂನಾತ್ಮಕ ತಡೆ ಒಡ್ಡುವ ಈ ಮಸೂದೆಯಲ್ಲಿರುವ ಕೆಲವು ಪ್ರತಿಬಂಧಕಗಳು ಹೀಗಿವೆ:

 

ಅಂತರ್ಜಾತಿ ವಿವಾಹವಾಗುವ, ವಿವಾಹವಾಗಲಿರುವ ಜೋಡಿ ಅಥವಾ ಅವರ ಕುಟುಂಬದವರು, ಸಂಬಂಧಿಕರು ಯಾವುದೇ ಹಳ್ಳಿ, ವಾಸಿಸುವ ಪ್ರದೇಶವನ್ನು ಬಿಡುವಂತೆ ಒತ್ತಾಯಿಸುವುದು; ಅವರ ಯಾವುದೇ ಸಾಮಾಜಿಕ ಸಂಬಂಧಗಳಿಗೆ ತಡೆಯೊಡ್ಡುವುದು; ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆ, ದೇವಾಲಯ ಅಥವಾ ಜೀವನವಶ್ಯಕವಾದ ಸ್ಥಳಗಳ ಭೇಟಿಗೆ ತಡೆಯೊಡ್ಡುವುದು; ಅಂತರ್ಜಾತೀಯ ಜೋಡಿಗಳ, ಅವರ ಕುಟುಂಬದ ಭೂಮಿ, ಆಸ್ತಿ ವಶಪಡಿಸಿಕೊಳ್ಳುವುದು; ದಂಡ ಹಾಕುವುದು; ಜೋಡಿಯ ಜೊತೆ ವ್ಯವಹಾರ ಮಾಡಲು ನಿರಾಕರಿಸುವುದು; ಉದ್ಯೋಗ, ಕಾಂಟ್ರಾಕ್ಟ್ ಮುಂತಾದ ಅವಕಾಶಗಳನ್ನು ನಿರಾಕರಿಸುವುದು; ಯಾವುದೇ ಬಗೆಯ ವೃತ್ತಿ, ವ್ಯಾಪಾರ ವಹಿವಾಟುಗಳಿಂದ ದೂರವಿರಿಸುವುದು; ಎಲ್ಲರಿಗೂ ಅನ್ವಯವಾಗುವ ಸೇವೆಗಳನ್ನು ನಿರಾಕರಿಸುವುದು; ಸಾಲ ಕೊಡಲು ನಿರಾಕರಿಸುವುದು; ಶಾಲೆಯಲ್ಲಿ ಪ್ರವೇಶ ನಿರಾಕರಿಸುವುದು– ಇವೆಲ್ಲವನ್ನೂ ಈ ಮಸೂದೆ ಶಿಕ್ಷಾರ್ಹ ಅಪರಾಧವಾಗಿಸುತ್ತದೆ.

 

ಯಾವುದೇ ವಯಸ್ಕ ಜೋಡಿಯ, ಅಂದರೆ ಹದಿನೆಂಟು ವರ್ಷ ತುಂಬಿದ ಹುಡುಗಿ ಅಥವಾ ಇಪ್ಪತ್ತೊಂದು ವರ್ಷ ತುಂಬಿದ ಹುಡುಗನ ನಡುವಣ, ವಿವಾಹದ ಹಕ್ಕನ್ನು ತಡೆಯುವ ವ್ಯಕ್ತಿ, ಗುಂಪುಗಳ ಪ್ರಯತ್ನಗಳನ್ನು ಮಸೂದೆ ಅಪರಾಧವೆಂದು ಘೋಷಿಸುತ್ತದೆ. ವಯಸ್ಕ ಜೋಡಿ ವಿವಾಹವಾಗುವ ತನ್ನ ನಿರ್ಧಾರವನ್ನು ಜಿಲ್ಲಾಧಿಕಾರಿಗೆ, ಸಂಬಂಧಪಟ್ಟ ಅಧಿಕಾರಿಗೆ ಮೌಖಿಕವಾಗಿ ಅಥವಾ ಬರಹದಲ್ಲಿ ತಿಳಿಸಿದ ಮೇಲೆ, ಯಾರೂ ಈ ಜೋಡಿಗೆ ಅಡ್ಡ ಬರುವಂತಿಲ್ಲ. ಜಾತಿ, ಸಂಸ್ಕೃತಿ, ರೂಢಿ, ಕಟ್ಟಳೆ, ಸಂಪ್ರದಾಯ, ‘ಮರ್ಯಾದೆ’ಯ ಹೆಸರಿನಲ್ಲಿ ಅವರಿಗೆ ಅಡ್ಡಿಯಾಗುವಂತಿಲ್ಲ. ಅವರಿಗೆ ದೈಹಿಕ ಹಿಂಸೆ, ಹತ್ಯೆ, ಕಿರುಕುಳ, ಅವರ ಭೇಟಿಗೆ ಯಾವುದೇ ರೀತಿಯ ತಡೆಯೊಡ್ಡುವುದು ಅಪರಾಧ. ಅಂತರ್ಜಾತೀಯ ವಿವಾಹವಾಗಲು ತೀರ್ಮಾನಿಸಿದವರನ್ನು, ಅವರಿಗೆ ನೆರವಾಗುವವರನ್ನು ಅಪಹರಿಸುವುದು, ಅವರಿಗಾಗಲಿ, ಸಂಬಂಧಿಕರಿಗಾಗಲಿ ಬಹಿಷ್ಕಾರ ಹಾಕುವುದು, ಒಕ್ಕಲೆಬ್ಬಿಸುವುದು, ಶಿಕ್ಷಿಸುತ್ತೇವೆಂದು ಹೆದರಿಸುವುದು ಅಪರಾಧ.

 

ಇದನ್ನೂ ಓದಿ

ಅಂತರ್ಜಾತೀಯ ಮದುವೆಯಾದವರನ್ನು ಬಲವಂತದಿಂದ ಅಣ್ಣ–ತಂಗಿ ಎಂದು ಘೋಷಿಸುವುದು; ಬದುಕಿದ್ದಾಗಲೇ ಅಂತ್ಯಸಂಸ್ಕಾರ ಮಾಡುವುದು ಅಪರಾಧ. ಆಸ್ತಿ ಹಕ್ಕನ್ನು ನಿರಾಕರಿಸುವುದು, ಈ ಜೋಡಿಗಾಗಲೀ ಅವರ ಬೆಂಬಲಿಗರಿಗಾಗಲೀ ಮಾನಸಿಕ, ದೈಹಿಕ ದಬ್ಬಾಳಿಕೆ ಮಾಡುವುದು, ಕೂಡಿ ಹಾಕುವುದು, ಫೋನ್, ಲ್ಯಾಪ್‌ಟಾಪ್ ಅಥವಾ ಯಾವುದೇ ಸಂವಹನ ಸಾಧನಗಳನ್ನು ವಶಪಡಿಸಿಕೊಳ್ಳುವುದು, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದು, ಕೆಲಸದಿಂದ ತೆಗೆಯುವುದು, ಲೈಂಗಿಕ ಹಿಂಸೆ, ಲೈಂಗಿಕ ಕಿರುಕುಳ, ಬಲವಂತದ ಗರ್ಭಪಾತ, ಒತ್ತಾಯದಿಂದ ವಿವಾಹವನ್ನು ರದ್ದುಗೊಳಿಸುವುದು, ಅಂತರ್ಜಾತೀಯ ಜೋಡಿ ಅಥವಾ ಕುಟುಂಬದವರ ವಿರುದ್ಧ ಸುಳ್ಳು ಸುದ್ದಿ ಹರಡಿ ಅಪಮಾನಗೊಳಿಸುವುದು ಅಪರಾಧ.

 

ಹಾಗೆಯೇ, ಒಬ್ಬ ವಯಸ್ಕ ಹೆಣ್ಣಿಗೆ ವಿವಾಹದ ಭರವಸೆ ಕೊಟ್ಟು ದೈಹಿಕ ಸಂಪರ್ಕ ಬೆಳೆಸಿ, ಆಕೆಯ ಜಾತಿ ತಿಳಿದ ನಂತರ ಹಿಂದೆಗೆಯುವುದು ಅಪರಾಧ. ಇಂಥ ಮದುವೆ ತಮ್ಮ ಜಾತಿ, ಬುಡಕಟ್ಟು, ಸಮುದಾಯ, ಸಂಪ್ರದಾಯಕ್ಕೆ ವಿರುದ್ಧವಾಗಿದೆ ಅಥವಾ ಕುಟುಂಬದವರ ಸಮುದಾಯದ ಆಶಯಕ್ಕೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಐದಕ್ಕಿಂತ ಹೆಚ್ಚು ಮಂದಿ ಜಮಾಯಿಸುವುದು, ಖಂಡಿಸುವುದು ಅಪರಾಧ.

 

ಯಾವುದೇ ವ್ಯಕ್ತಿ ತನ್ನ ವಿವಾಹ ಸ್ವಾತಂತ್ರ್ಯದ ಹಕ್ಕಿಗೆ ಅಡ್ಡ ಬರುವುದನ್ನು ತಡೆಯಲು ಸಿವಿಲ್ ನ್ಯಾಯಾಲಯದಲ್ಲಿ ತಡೆಆದೇಶ (ಇಂಜಂಕ್ಷನ್) ಕೋರಬಹುದು. ತುರ್ತು ಸನ್ನಿವೇಶದಲ್ಲಿ ನೋಟಿಸ್ ನೀಡದೆಯೇ, ಸಂಬಂಧಪಟ್ಟ ವ್ಯಕ್ತಿಗಳ ಗೈರುಹಾಜರಿಯಲ್ಲೇ ತಡೆಆದೇಶ ಮತ್ತು ರಕ್ಷಣೆಯನ್ನು ನ್ಯಾಯಾಲಯ ಒದಗಿಸುವುದು ಕಡ್ಡಾಯ. ಇಂಥ ಆದೇಶದ ನಂತರ ಜೋಡಿಗೆ ಹಾಗೂ ಸಂಬಂಧಪಟ್ಟವರಿಗೆ ಪೂರ್ಣ ರಕ್ಷಣೆ ಒದಗಿಸುವುದು ಪೊಲೀಸರ ಜವಾಬ್ದಾರಿ. ತಡೆಆದೇಶ ಉಲ್ಲಂಘಿಸುವವರಿಗೆ ಶಿಕ್ಷೆ ನಿಗದಿಗೊಳಿಸಲಾಗಿದೆ. ಮರ್ಯಾದೆಯ ಹೆಸರಲ್ಲಿ ನಡೆಯುವ ಹತ್ಯೆ, ಹಿಂಸೆ, ಗುಂಪುಹಲ್ಲೆಗಳಿಗೆ ಶಿಕ್ಷೆಯ ಪ್ರಮಾಣ ನಿಗದಿಯಾಗಿದೆ.

 

ಮಸೂದೆಯನ್ನು ಧ್ವನಿಮತಕ್ಕೆ ಹಾಕುವ ಮೊದಲು ಎಚ್.ಕೆ. ಪಾಟೀಲರು, ಈ ಮಸೂದೆ ಕಾಯ್ದೆಯಾದ ನಂತರದ ನಿಯಮಗಳನ್ನು ರೂಪಿಸುವಾಗ ಆಗಬೇಕಾದ ಕೆಲಸಗಳು ಇನ್ನೂ ಇವೆ ಎಂದರು. ಮಾನ್ಯಾ ಹತ್ಯೆಯ ನಂತರ ಇಂಥ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ರೂಪಿಸುವ ಕುರಿತು ಸಚಿವ ಎಚ್.ಸಿ. ಮಹಾದೇವಪ್ಪ ಹೇಳಿದ್ದನ್ನೂ ಪಾಟೀಲರು ನೆನೆದರು. ಈ ಹಿನ್ನೆಲೆಯಲ್ಲಿ ‘ವಿಶೇಷ ನ್ಯಾಯಾಲಯದ ಪ್ರಸ್ತಾಪ ಮಾಡಿದ್ದೇವೆ… ರೂಲ್ಸ್ ಮಾಡುವಾಗ ನೀವು ಹೇಳಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ಮಾಡುತ್ತೇವೆ’ ಎಂದು ಸದನದ ಸದಸ್ಯರಿಗೆ ಹೇಳಿದರು. ಈ ನಿಟ್ಟಿನಲ್ಲಿ ಕಾಳಜಿಯುಳ್ಳ ವಕೀಲರು, ನ್ಯಾಯಮೂರ್ತಿಗಳು, ಪೊಲೀಸ್ ಅಧಿಕಾರಿಗಳು, ಚಿಂತಕಿಯರು, ಚಿಂತಕರು ಸರ್ಕಾರಕ್ಕೆ ಇನ್ನಷ್ಟು ಸಲಹೆಗಳನ್ನು ಕೊಡುವ ಅಗತ್ಯವಿದೆ.

 

‘ಇವ ನಮ್ಮವ’ ಮಸೂದೆ ಈ ಕಾಲದ ಅನಿವಾರ್ಯ ಅಗತ್ಯವಾಗಿತ್ತು. ಎಷ್ಟೋ ಸಂದರ್ಭಗಳಲ್ಲಿ ಮದುವೆ ನೋಂದಣಿ ಮಾಡುವ ಸಬ್ ರಿಜಿಸ್ಟ್ರಾರ್ ಕಚೇರಿಗಳು, ಪೊಲೀಸ್ ಇಲಾಖೆ, ನ್ಯಾಯಾಂಗವು ತೋರುವ ಜಡತೆ, ಉದಾಸೀನಗಳನ್ನೂ ಮಸೂದೆ ಹೋಗಲಾಡಿಸಬಲ್ಲದು. ಜಾತಿ–ಧರ್ಮಗಳ ಮದದ ಜೊತೆಗೆ, ಕಾನೂನಿನ ಅಜ್ಞಾನದಿಂದ ಕೂಡ ಠೇಂಕಾರದಿಂದ ವರ್ತಿಸುವ ಅಣ್ಣಂದಿರು, ಅಪ್ಪಂದಿರು, ನೆಂಟರಿಷ್ಟರು, ನೆರೆಹೊರೆಯವರಿಗೆ ಮಸೂದೆಯಲ್ಲಿ ಎಚ್ಚರವಿದೆ, ಕಡಿವಾಣವಿದೆ, ಶಿಕ್ಷೆಯಿದೆ.

 

ಈಚೆಗಷ್ಟೇ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೆ ತಂದ ಕರ್ನಾಟಕದ ಹಲವು ಪ್ರಗತಿಪರ ಮಸೂದೆಗಳ ಸಾಲಿಗೆ ಈ ಮಸೂದೆಯೂ ಸೇರಿದೆ. ರಾಜ್ಯಪಾಲರ ಅಂಕಿತವಷ್ಟೇ ಬಾಕಿ ಇದೆ. ಈ ಮಸೂದೆಯಲ್ಲಿರುವ ‘ಇವ ನಮ್ಮವನೆಂದೆನಿಸಯ್ಯಾ’ ಎಂಬ ವಿಶ್ವಾತ್ಮಕ ಜಾತ್ಯತೀತ ಬಿನ್ನಹವನ್ನು ಶಿಕ್ಷಣ, ಸಾಹಿತ್ಯ, ನ್ಯಾಯಾಂಗ, ಪತ್ರಿಕೋದ್ಯಮ, ಪೊಲೀಸ್ ಮುಂತಾದ ಹಲವು ವಲಯಗಳು ಬದ್ಧತೆಯಿಂದ ಎಲ್ಲೆಡೆ ಹಬ್ಬಿಸಿದರೆ, ಇವನ್ನೆಲ್ಲ ಜನರಿಗೆ ಸರಳವಾಗಿ ತಿಳಿ ಹೇಳಿದರೆ ಮಾತ್ರ ಈ ಮಸೂದೆ ಕಾಯ್ದೆಯಾಗಿ, ದಕ್ಷವಾಗಿ ಜಾರಿಯಾಗಬಲ್ಲದು; ಮಾನಗೇಡಿ ಹತ್ಯೆಗಳ ಹಿಂಸೆಗೆ ಪ್ರಬಲ ಪ್ರತಿಬಂಧಕವಾಗಬಲ್ಲದು.

 

ಅದೇ ವೇಳೆಗೆ, ದಲಿತ–ದಲಿತೇತರರ ಅಂತರ್ಜಾತೀಯ ವಿವಾಹಗಳಿಗೆ ಸರ್ಕಾರ ಕೊಡುತ್ತಿರುವ ಪ್ರೋತ್ಸಾಹಧನವೂ ಹೆಚ್ಚಬೇಕು. ಎಲ್ಲ ಅಂತರ್ಜಾತೀಯ, ಅಂತರ್ಧರ್ಮೀಯ ವಿವಾಹಿತರಿಗೂ ಪ್ರೋತ್ಸಾಹಧನ, ಸ್ವ–ಉದ್ಯೋಗಕ್ಕೆ ವಿಶೇಷ ಸಾಲ ಯೋಜನೆಗಳು ಜಾರಿಯಾಗಬೇಕು. ಮುಖ್ಯವಾಗಿ, ರವಿವರ್ಮಕುಮಾರ್ ಆಯೋಗ ಶಿಫಾರಸು ಮಾಡಿರುವ ಅಂತರ್ಜಾತೀಯ ವಿವಾಹಿತರಿಗಾಗಿ ಶೇ 1ರಷ್ಟು ‘ಮೀಸಲಾತಿಯೊಳಗಣ ಮೀಸಲಾತಿ’ ಈಗಲಾದರೂ ಜಾರಿಯಾಗಬೇಕು. ಕಾರ್ಪೊರೇಟ್, ಖಾಸಗಿ ವಲಯಗಳು ಅಂತರ್ಜಾತೀಯ ವಿವಾಹಿತರಿಗೆ ಬೆಂಬಲ–ಮೀಸಲಾತಿಗಳನ್ನು ನೀಡುವ ನಿರ್ಧಾರ ಮಾಡಿದರಂತೂ ಸಾಮಾಜಿಕ ಬದಲಾವಣೆಯ ಹೊಸ ಹಾದಿಗಳೇ ತೆರೆಯಬಲ್ಲವು.

 

ಕೃಪೆ: -ಪ್ರಜಾವಾಣಿ (30/03/2026)

 

https://www.prajavani.net/op-ed/articles/karnataka-intercaste-marriage-protection-bill-3866627

Nataraj Huliyar

Post Courtesy: ಶ್ರೀಧರ್ ಆರ್

Erlebnisreicher_Nervenkitzel_führt_über_die_Straße_zum_chicken_road_slot_und     |     Excitement_awaits_with_aviator_game_apk_and_thrilling_chances_to_elevate_your_ga     |     Интуиция_и_олимп_казино_скачать_помогут_рас     |     Analyse_détaillée_et_betify_casino_une_plateforme_de_jeux_en_ligne_innovante_p     |     Genuine_excitement_and_aviator_app_download_for_thrilling_wins_await_players_tod     |     Remarkable_artistry_defines_innovative_gameplay_with_royal_reels_and_exciting_ca     |     Strategic_gameplay_defines_the_chicken_road_game_and_demands_quick_reflexes_for     |     Potential_rewards_and_strategic_insights_surrounding_kwiff_betting_experiences_a     |     Искушение_азарта_и_Olimp_Casino_для_опытных_игрок     |     Реальные_выигрыши_и_олимп_казино_кз_твой_пу     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें