ಮುಂಬೈ: 2013ರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ‘ತೆಹೆಲ್ಕಾ’ ನಿಯತಕಾಲಿಕೆಯ ಮಾಜಿ ಮುಖ್ಯ ಸಂಪಾದಕ ತರುಣ್ ತೇಜ್ಪಾಲ್ ಅವರಿಗೆ ಬಾಂಬೆ ಹೈಕೋರ್ಟ್ನ ಗೋವಾ ಪೀಠ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹5 ಲಕ್ಷ ದಂಡ ವಿಧಿಸಿದೆ.
2021ರಲ್ಲಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ಖುಲಾಸೆ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿ, ತೇಜ್ಪಾಲ್ ಅವರನ್ನು ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿತ್ತು. ಬಳಿಕ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
2013ರಲ್ಲಿ ಗೋವಾದಲ್ಲಿ ನಡೆದ ಥಿಂಕ್ಫೆಸ್ಟ್ ಕಾರ್ಯಕ್ರಮದ ವೇಳೆ ಕಿರಿಯ ಮಹಿಳಾ ಸಹೋದ್ಯೋಗಿಯ ಮೇಲೆ ಲಿಫ್ಟ್ನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ನ್ಯಾಯಾಲಯವು ತೇಜ್ಪಾಲ್ಗೆ ಶರಣಾಗಲು ಎರಡು ವಾರಗಳ ಕಾಲಾವಕಾಶ ನೀಡಿದ್ದು, ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
