ನಡೆ-ನುಡಿಯಲ್ಲೂ ಒಂದೇ ಆಗಿದ್ದ ಅಪರೂಪದ ಅಧಿಕಾರಿ (ನಾನು ಕಂಡ ವೆಂಕಟೇಶಯ್ಯ ಸಾಹೇಬರು)
ಮಾತೃ ಹೃದಯದ ಮಾನವೀಯ ಅಧಿಕಾರಿ ಡಾ. ವೆಂಕಟೇಶಯ್ಯ ನೆಲ್ಲುಕುಂಟೆ
ಡಾ. ವೆಂಕಟೇಶಯ್ಯ ಸಾಹೇಬರ ಬಗ್ಗೆ #harshakumarkugwe ಸರ್. ಕಡಿಮೆ ಹೇಳಿದ್ದಾರೆ ಎಂದರೆ ತಪ್ಪಾಗಲಾರದು. ಡಾ. ವೆಂಕಟೇಶಯ್ಯ ಸಾಹೇಬರ ಬಗ್ಗೆ ಬರೆಯುವಷ್ಟು ನಾನು ದೊಡ್ಡವನಲ್ಲ ಎಂದು ತಿಳಿದಿದ್ದೇನೆ. ಹರ್ಷ ಕುಮಾರ್ ಸರ್ ಜೈ ಭೀಮ್ ಮೂವಿ ಇಂದ ನನಗೆ ಡಾ. ವೆಂಕಟೇಶಯ್ಯ ಸಾರ್ ಪರಿಚಯವಾದರು .
ಅವರೇ ನನ್ನನ್ನು ಮೊದಲು ಸಾಹೇಬರ ಬಳಿಗೆ ಕರೆದುಕೊಂಡು ಹೋದವರು. ಅವರು ಸಾಹೇಬರ ಬಗ್ಗೆ ಬರೆದಾಗ ನನ

ಗೂ ಕೂಡ ನಾನು ಕಂಡ ವೆಂಕಟೇಶಯ್ಯ ಸಾಹೇಬರ ಬಗ್ಗೆ ಒಂದೆರಡು ಮಾತು ಬರೆಯಬೇಕೆನಿಸಿತು. ನನ್ನ ಮಾತುಗಳು ಅತಿರೇಖಾ, ವೈಭವ ಉತ್ಪ್ರೇಕ್ಷೆ , ಹೊಗಳಿಕೆ ಯಾಗಿ ಕಂಡುಬಂದರೂ ನನಗೇನು ಅಭ್ಯಂತರವಿಲ್ಲ. ನಾನು ಹೇಳುವುದು ನಾನು ವೆಂಕಟೇಶಯ್ಯ ಸಾಹೇಬರನ್ನು ನೈಜವಾಗಿ ಕಂಡ ರೀತಿ ಹಾಗೂ ನನ್ನ ಅನುಭವದ ಮಾತುಗಳೇ ಆಗಿವೆ.
ವೆಂಕಟೇಶಯ್ಯ ಸಾಹೇಬರು ಕೇವಲ ಮಾತು ಬರವಣಿಗೆ ಹಾಗೂ ಭಾಷಣಕ್ಕೆ ಮಾತ್ರ ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ನ್ಯಾಯವನ್ನು ಹೇಳುವವರಾಗಿರಲಿಲ್ಲ . ಅವರು ನಿಜ ಜೀವನದಲ್ಲೂ ಅವರ ಪ್ರತಿ ನಡೆಯ ಜೊತೆಗೆ ಕಾರ್ಯದಲ್ಲಿಯೂ ಕೂಡ ಸಾಮಾಜಿಕ ಕಳಕಳಿ, ಶೋಷಿತ ಸಮುದಾಯಗಳು ಮತ್ತು ಸಮಾಜದ ಕಟ್ಟ ಕಡೆಯ ಸಮುದಾಯಗಳಾದ ಆದಿವಾಸಿಗಳು, ಅಲೆಮಾರಿಗಳು ಹಾಗೂ ದೀನದಲಿತರ ಬಗ್ಗೆ ಅತಿಯಾದ ಪ್ರೀತಿ, ಅಭಿಮಾನ ಮತ್ತು ಸಾಮಾಜಿಕ ಬದ್ಧತೆ ಇಟ್ಟುಕೊಂಡವರಾಗಿದ್ದರು. ಎಂದು ನನಗೆ ಅನಿಸುತ್ತದೆ.
ನಾನು ಕಥೆಯನ್ನು ಹೇಳುತ್ತಿಲ್ಲ ಅಥವಾ ಮುಖಸ್ತುತಿಗೂ ಬರೆಯುತ್ತಿಲ್ಲ. ಕೆಲವರು ಬರವಣಿಗೆಯಲ್ಲಿ ಹೇಳುವುದನ್ನು ಕಾರ್ಯದಲ್ಲಿ ಮಾಡುವುದು ಒಂದು, ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಾನು 2023 ಸೆಪ್ಟೆಂಬರ್ 15 ರಿಂದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾ ಅಧಿಕಾರಿಯಾಗಿ ನೇಮಕಗೊಂಡು ಈವರೆಗೂ ಸತತ ಮೂರು ವರ್ಷಗಳಿಂದಲೂ ಆ ಹುದ್ದೆಯಲ್ಲಿಯೇ ಮುಂದುವರಿಯಲು ಪ್ರಮುಖ ಕಾರಣವೇ ಸಾಹೇಬರು.
ಅದಕ್ಕಾಗಿ ಅವರು ಅನುಭವಿಸಿದ ಕಷ್ಟಗಳು ಮುಜುಗರಗಳು ಅವಮಾನಗಳು ನನಗೆ ಮಾತ್ರ ಗೊತ್ತು. ಪ್ರತಿ ಬಾರಿಯ ನನ್ನ ರಿನಿವಲ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ( ಪ್ರತಿ 11 ತಿಂಗಳಿಗೆ ಒಮ್ಮೆ ರಿನಿವಲ್ ಮಾಡಬೇಕು) ಕೆಲವರು (ನನ್ನನ್ನು ಮೊದಲಿನಿಂದಲೂ ಆ ಹುದ್ದೆಗೆ ಬರಬಾರದೆಂದು ತಡೆದ ವರ್ಗ) ನನ್ನ ಮೇಲೆ ಹಲವಾರು ನಕಲಿ ಲೆಟರ್ ಹೆಡ್ ಗಳ ಮೂಲಕ ಕೊಟ್ಟಿದೂರುಗಳು ಹಾಗೂ ಗಾಸಿಪ್ ಳನ್ನು ನಿರಂತರವಾಗಿ ಹರಡುತ್ತಾ ಬರುತ್ತಿದ್ದರು.
ಇವರು ಬರೆಯುವ ನಕಲಿ ದೂರಿಗಳಲ್ಲಿ ಉದ್ದೇಶ ಪೂರ್ವಕವಾಗಿ ವೆಂಕಟೇಶಯ್ಯ ಸಾಹೇಬರ ಹೆಸರನ್ನು ಬರೆಯುತ್ತಿದ್ದರು. ಈ ಹೆಸರಿಲ್ಲದ ಮೂಖರ್ಜಿಗಳು ಮತ್ತು ನಕಲಿ ಲೆಟರ್ ಗಳ ಮೂಲಕ ನೀಡುವ ಕೊಟ್ಟಿ ದೂರುಗಳ ಮುಖ್ಯ ಉದ್ದೇಶ ವೆಂದರೆ ವೆಂಕಟೇಶಯ್ಯ ಸಾಹೇಬರು ಯಾವುದೇ ಕಾರಣಕ್ಕೂ ನನಗೆ ಸಹಾಯ ಮಾಡಬಾರದು ಎಂಬುದೇ ಆಗಿತ್ತು. ಈ ನಕಲಿ ಮತ್ತು ಕೊಟ್ಟಿ ದೂರುಗಳನ್ನು ಮಾನ್ಯ ಮುಖ್ಯಮಂತ್ರಿಗಳ ತನಕವೂ ಷಡ್ಯಂತ್ರವಾದಿಗಳು ರವಾನಿಸುತ್ತಿದ್ದರು.
ನನ್ನ ಅನುಭವದಲ್ಲಿ ಹೇಳುವುದಾದರೆ ಇದೇ ಸಂದರ್ಭದಲ್ಲಿ ಬೇರೆ ಯಾವುದೇ ಅಧಿಕಾರಿ ಇದ್ದರೂ ಕೂಡ ನನಗ್ಯಾಕಪ್ಪ ಬೇಕು ಈ ಉಸಾಬರಿ ಎಂದು ಹಿಂದೆ ಸರಿದು ಬಿಡುತ್ತಿದ್ದರೇನೋ?, ಆದರೆ ದೀನ ದಲಿತ ಮತ್ತು ಆದಿವಾಸಿಗಳ ಬಗ್ಗೆ ಸಾಹೇಬರಿಗಿದ್ದ ನಂಬಿಕೆ ಪ್ರೀತಿ ವಿಶ್ವಾಸ ಮತ್ತು ಸಾಮಾಜಿಕ ಬದ್ಧತೆಯಿಂದ ಯಾವ ಕೊಟ್ಟಿದೂರುಗಳಿಗೂ ತಲೆಕೆಡಿಸಿಕೊಳ್ಳದೆ. ತಮ್ಮ ಮೇಲೆಯೂ ಬರುವ ಸುಳ್ಳು ದೂರುಗಳನ್ನು ನಗುತ್ತಲೇ neglect ಮಾಡುತ್ತಾ , ನಮ್ಮ ಪರವಾಗಿ ನಿಂತವರು.
ಇದರ ಜೊತೆಗೆ ನನ್ನ ಮನಸ್ಸಿನಲ್ಲಿ ಸದಾ ಕಾಡುತ್ತಿರುವ ಒಂದು ಘಟನೆ ಎಂದರೆ ವೆಂಕಟೇಶಯ್ಯ ಸಾಹೇಬರು ನಂಬುವ ವ್ಯಕ್ತಿಯೊಬ್ಬ ( ಈತ ಸಾಮಾಜಿಕ ನ್ಯಾಯದ ಮುಖವಾಡ ಹಾಕಿಕೊಂಡು ಬಾಬಾ ಸಾಹೇಬರು ಮತ್ತು ವೈಚಾರಿಕತೆ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಬರವಣಿಗೆಯನ್ನು ಬರೆಯುತ್ತಾ, ತನ್ನನ್ನು ತಾನು ಒಬ್ಬ ಪ್ರಗತಿಪರ ಎಂದುಕೊಂಡೂ, ಇದನ್ನೇ ಸಮಾಜವು ನಂಬುವಂತೆ ಮಾಡಿದ್ದಾನೆ. ಈತ ಒಳಗಡೆ ಜಾತಿವಾದಿಯ ಜೊತೆಗೆ ಸಂಕುಚಿತ ಮನೋಭಾವನೆ ಇಟ್ಟುಕೊಂಡು ಹೊಟ್ಟೆ ಉರಿ ಹೊಟ್ಟೆ ಉರಿ ಪಡುತ್ತಾ, ಈತ ಮಾತ್ರ ಶ್ರೇಷ್ಠ , ಈತ ಮಾತ್ರ ವಿದ್ವಾಂಸ ಉಳಿದೆಲ್ಲರೂ ಕನಿಷ್ಠ ಎಂದು ತಿಳಿದುಕೊಂಡು ಪ್ರಗತಿಪರ ಮುಖವಾಡ ಹಾಕಿಕೊಂಡು ಬದುಕುತ್ತಿರುವ ವ್ಯಕ್ತಿ ) ಈ ಮಹಾನುಭಾವ ನನ್ನ ಬಗ್ಗೆ ಹಲವಾರು ಬಾರಿ negative ಆಗಿ ಹೇಳಿದರೂ ಕೂಡ ಅವರು ತಲೆ ಕೆಡಿಸಿಕೊಳ್ಳದೆ, ತಾವು ಮಾತ್ರ ನಂಬಿದ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯದ ಪರವಾಗಿರುವ ದೃಢತೆಯಿಂದ ನಿಂತಿದ್ದರಿಂದಲೇ ನಾನು ಇವತ್ತಿನವರೆಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾಧಿಕಾರಿಯಾಗಿ ಮುಂದುವರೆದಿದ್ದೇನೆ.
ಪ್ರತಿ ಹಂತದಲ್ಲೂ ಸಾಹೇಬರು ರಿ ನೀವು ಹುಷಾರಾಗಿರಿ, ನಿಮ್ಮ ವಿರುದ್ಧ ಒಂದು ದೊಡ್ಡ ವರ್ಗವ ನಿಂತಿದೆ ಒಂದು ಸಣ್ಣ ತಪ್ಪು ಕಂಡರೂ ನಿಮ್ಮನ್ನು ಮುಗಿಸಿಬಿಡುತ್ತಾರೆ ಹುಷಾರಾಗಿರಿ, ನೀವೊಬ್ಬರೇ ಬೆಳೆಯುವುದಲ್ಲ, ನಿಮ್ಮ ಸಮುದಾಯಗಳ ಅಭಿವೃದ್ಧಿ ಕಡೆ ಗಮನ ಹರಿಸಿ, ಇಂದಿಗೂ ಕೂಡ ಕಾಡು ಕಾಡುಂಚಿನಲ್ಲಿರುವ ಅರಣ್ಯಧಾರಿತ ಆದಿವಾಸಿಗಳು ಕನಿಷ್ಠ ಮೂಲಭೂತ ಸೌಲಭ್ಯಗಳಿದೆ ಬದುಕುತ್ತಿದ್ದಾರೆ ಅವರ ಕಡೆ ಹೆಚ್ಚು ಗಮನ ಹರಿಸಿ, ಸಾಧ್ಯವಾದರೆ ಇನ್ನೊಂದಷ್ಟು ಜನಕ್ಕೆ ಕೆಲಸ ಕೊಡಿ, ಪ್ರತಿ ಜಿಲ್ಲೆಗಳಿಗೆ ಹೋಗಿ ಅಲ್ಲಿರುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ನನಗೆ ಕಳುಹಿಸಿ ಪ್ರಸ್ತುತ ಮುಖ್ಯಮಂತ್ರಿಗಳು ಇರುವಾಗಲೇ ಅವರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳಾದರೂ ಕೊಡಿಸೋಣ ಎಂದು ಹಲವಾರು ಬಾರಿ ನನಗೆ ಕಿವಿ ಮಾತು ಹೇಳುತ್ತಿದ್ದರು. ಮೊದಲೇ ನಾವು ಆದಿವಾಸಿಗಳು ನಮಗೆ ಸರ್ಕಾರದ ರೀತಿ ರಿವಾಜುಗಳು ಗೊತ್ತಿಲ್ಲದೆ ತಪ್ಪು ಮಾಡಿದಾಗಲೂ ಕೂಡ ಮಾತೃ ಹೃದಯದಿಂದ ಕ್ಷಮಿಸಿ ತಿದ್ದುತಿದ್ದರು.
ಒಮ್ಮೆ ಅನಂತನಾಯ್ಕ ಸರ್ ( ಅವರಿಗೆ ನಾನೂ ವೆಂಕಟೇಶಯ್ಯ ಸಾಹೇಬರಿಗೆ ಮೊದಲಿನಿಂದಲೂ ಪರಿಚಯ ಎಂಬುದು ಗೊತ್ತಿಲ್ಲದೆ) ನನ್ನನ್ನು ಪರಿಚಯ ಮಾಡಿಕೊಡುತ್ತಾ ಇವನು ಡಾ. ಕೃಷ್ಣಮೂರ್ತಿ ಅಂತ ಸಾರ್ ಇರುಳಿಗ ಸಮುದಾಯದ ಮೊದಲ ಪಿ ಎಚ್ ಡಿ ಪದವಿದರ ಇವನ ಮೇಲೆ ಕೆಲವರು ಗುಂಪು ಮಾಡಿಕೊಂಡು ಅಪಪ್ರಚಾರ ಮಾಡಿ ಇವರನ್ನೂ ಆ ಕೆಲಸದಿಂದ ತೆಗೆಯಲು ನಿರಂತರ ಷಡ್ಯಂತರ ಮಾಡುತ್ತಿದ್ದಾರೆ ಸರ್ ನೀವೇ ರಕ್ಷಣೆ ಮಾಡಬೇಕು ಎಂದು ಹೇಳಿದಾಗ. ವೆಂಕಟೇಶಯ್ಯ ಸಾಹೇಬರು ನನ್ನ ಕಡೆ ತಿರುಗಿ ನೋಡಿ ನಗುತ್ತಾ ಹೀಗೆ ಹೇಳಿದರೆ “ಇವನಿಂದಾಗಿ ನನಗೂ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ ” ಎಂದು ಜೋರಾಗಿ ನಕ್ಕರು. ಅವರು ಹೇಳಿದ ಮಾತು ಜೋಕ್ ಅಷ್ಟೇ ಅಲ್ಲ, ಅದು ಸತ್ಯವೂ ಕೂಡ ಆಗಿತ್ತು.
ಇವತ್ತಿನವರೆಗೂ ಅವರು ನನ್ನನ್ನು ರಕ್ಷಣೆ ಮಾಡುತ್ತಿದ್ದ ರೀತಿಯನ್ನು ನೆನೆಸಿಕೊಂಡರೆ , ಅವರಿಲ್ಲದ ನನ್ನ ಮುಂದಿನ ಸ್ಥಿತಿ ಏನಾಗುತ್ತದೆ ಎಂಬುದೇ ನನಗೆ ಭಯವಾಗುತ್ತಿದೆ.?.
ನನ್ನ ಅವಧಿ ಆಗಸ್ಟ್ ಗೆ ಮುಗಿಯುತ್ತಿದ್ದು ಮುಂದೆ ನಾನು ಸಂಶೋಧನಾಧಿಕಾರಿಯಾಗಿ ಮುಂದುವರಿಯುತ್ತೆನು ಇಲ್ಲವೋ ಎಂಬುದೇ ನನಗೆ ನಂಬಿಕೆ ಇಲ್ಲದಂತಾಗಿದೆ. ಏಕೆಂದರೆ ನಾವು ದಿಕ್ಕು ದೆಸೆ ಇಲ್ಲದ ಸಮುದಾಯಗಳು ನಮಗೆ ಯಾವುದೇ ರಾಜಕಾರಣಿಗಳಾಗಲಿ ಮಠ ಮಂದಿರಗಳಾಗಲಿ ಅಥವಾ ದೊಡ್ಡ ಸಂಘಟನೆಗಳ ಪ್ರಬಲ ವ್ಯಕ್ತಿಗಳು ಯಾರು ಇಲ್ಲ. ಇರುವವರು ಕೇವಲ ಇಂತಹ ಮಾನವೀಯ ಮತ್ತು ಮಾತೃ ಹೃದಯ ಅಧಿಕಾರಿಗಳು ಹಾಗೂ ಕೆಲವು ಸಾಮಾಜಿಕ ನ್ಯಾಯದ ಪರವಾಗಿರುವವರು ಮಾತ್ರವೇ ನಮ್ಮನ್ನು ರಕ್ಷಣೆ ಮಾಡಲು ಸಾಧ್ಯ.
ಈ ಮೂರು ವರ್ಷದಲ್ಲಿ ಅವರು ನನ್ನಿಂದ ಒಂದು ಬುಕ್ಕು ಕೂಡ ತೆಗೆದುಕೊಳ್ಳಲಿಲ್ಲ ಆದರೆ ನನ್ನಿಂದ ಮಾತ್ರ ಅವರಿಗೆ ಕೆಲವು ಇರಿಸು ಮುರಿಸಿನ ಸಂದರ್ಭಗಳನ್ನು ಎದುರಿಸಿದ್ದಾರೆ ಹೀಗೆ ನನಗೆ ಮತ್ತು ನಮ್ಮ ಸಮುದಾಯಕ್ಕೆ ಎಲೆಯ ಮರೆಯ ಕಾಯಿಯಂತೆ ದುಡಿಯುತ್ತಿರುವ ಸಾಹೇಬರ ಬಗ್ಗೆ ಹೇಳುತ್ತಾ ಹೋದರೆ ದಿನಗಳೇ ಸಾಲದು. ಅವರಿದ್ದಷ್ಟು ದಿನ ಪ್ರತಿ ಬಾರಿಯೂ ಬಜೆಟ್ ನಲ್ಲಿ ಪರಿಶಿಷ್ಟ ಪಂಗಡದ ನಿಜವಾದ ವಾರಸುದಾರ ಫಲಾನುಭವಿಗಳಾದ ಆದಿವಾಸಿಗಳು ಮತ್ತು ಬುಡಕಟ್ಟುಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸಗಳು ನಡೆದಿದೆ. ಇನ್ನು ಮುಂದೆ ನಮ್ಮ ಗತಿ ಏನು ಎಂಬುದೇ ನಮಗೆ ಯಕ್ಷ ಪ್ರಶ್ನೆಯಾಗಿದೆ.
ಡಾ. ವೆಂಕಟೇಶಯ್ಯ ಸಾಹೇಬರಿಲ್ಲದ ಸಿಎಂ ಕಚೇರಿ ನಮಗೆ ಗಗನ ಕುಸುಮವಾಗುತ್ತದೆ .ನಾವು ಯಾರ ಮುಂದೆ ಹೋಗಿ ನಮ್ಮ ಸಮಸ್ಯೆಗಳನ್ನು ಹೇಳುವುದು ತಿಳಿಯುತ್ತಿಲ್ಲ. ನಾವು ಇವತ್ತಿನ ನಗರೀಕರಣ ಮತ್ತು ಬಾಯಿ ಮಾತಿನ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸುಧಾರಣೆಯ ಜನರಿಂದ ಹಾಗೂ ನಮ್ಮ ಪರಿಶಿಷ್ಟ ಪಂಗಡದ ಪ್ರಬಲ ಸಮುದಾಯಗಳ ಜೊತೆ ಹೇಗೆ ಪೈಪೋಟಿ ಮಾಡಿ survival ಆಗುತ್ತೇವೆಯೋ ಎಂದು ದಿಕ್ಕು ತೋಚದಾಗಿದೆ. ಏನೇ ಆದರೂ ಡಾ. ವೆಂಕಟೇಶಯ್ಯ ಸಾಹೇಬರು ಇಲ್ಲದ ಮುಖ್ಯಮಂತ್ರಿಗಳ ಕಚೇರಿ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
